ಶ್ರೀ ವಿಜಯ ಕವಚ (ಶ್ರೀ ವಿಜಯರಾಯರ ಕವಚ)
ಶ್ರೀ ವ್ಯಾಸವಿಠಲ ವಿರಚಿತ (ಶ್ರೀ ಕಲ್ಲೂರು ಸುಬ್ಬಣ್ಣದಾಸರು)
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ
ಸ್ಮರಿಸಿ ಬದುಕಿರೋ ದಿವ್ಯ ಚರಣಕೆರಗಿರೋ
ದುರಿತ ತರಿದು ಪೊರೆವ ವಿಜಯಗುರುಗಳೆಂಬರ ॥ ಪಲ್ಲವಿ ॥
ದಾಸರಾಯನಾ ದಯವ ಸೂಸಿಪಡೆದನಾ
ದೋಷರಹಿತನ ಸಂತೋಷಭರಿತನಾ ॥ ೧ ॥
ಜ್ಞಾನವಂತನಾ ಬಲುನಿದಾನಿ ಶಾಂತನಾ
ಮಾನ್ಯವಂತನಾ ಮಹವದಾನ್ಯದಾಂತನಾ ॥ ೨ ॥
ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಮನಕೆ ಹರುಷ ಸುರಿಸುವ ॥ ೩ ॥
ಮೋದಭರಿತನಾ ಪಂಚಭೇದವರಿತನಾ
ಸಾಧುಚರಿತನಾ ಮನವಿಷಾದ ಮರೆತನಾ ॥ ೪ ॥
ಇವರ ನಂಬಿದಾ ಜನಕೆ ಭವವಿದೆಂಬುದೋ
ಹವಣವಾಗದೋ ನಮ್ಮವರ ಮತವಿದೂ ॥ ೫ ॥
ಪಾಪಕೋಟಿಯ ರಾಶಿ ಲೇಪವಾಗದೋ
ತಾಪ ಕಳೆವನೋ ಬಲು ದಯಾಪಯೋನಿಧಿ ॥ ೬ ॥
ಕವನ ರೂಪದಿ ಹರಿಯ ಸ್ತವನ ಮಾಡಿದ
ಭುವನ ಬೇಡಿದ ಮಾಧವನ ನೋಡಿದಾ ॥ ೭ ॥
ರಂಗನೆಂದನಾ ಭವವು ಹಿಂಗಿತೆಂದನಾ
ಮಂಗಳಾಂಗನ ಅಂತರಂಗವರಿತ(ದ)ನಾ ॥ ೮ ॥
ಕಾಶಿನಗರದಲ್ಲಿದ್ದ ವ್ಯಾಸದೇವನಾ ದಯವ
ಸೂಸಿ ಪಡೆದನಾ ಉಲ್ಲಾಸತನದಲೀ ॥ ೯ ॥
ಚಿಂತೆ ಬ್ಯಾಡಿರೋ ನಿಶ್ಚಿಂತರಾಗಿರೋ
ಶಾಂತಗುರುಗಳಾ ಪಾದವಾಂತು ನಂಬಿರೋ ॥ ೧೦ ॥
ಖೇದವಾಗದೋ ನಿಮಗೆ ಮೋದವಾಹುದೋ
ಆದಿದೇವನ ಸುಪ್ರಸಾದವಾಹುದೋ ॥ ೧೧ ॥
ತಾಪ ತಡೆವನೂ ಬಂದ ಪಾಪ ಕಡಿವನೋ
ಶ್ರೀಪತಿಯ ಪಾದಸಮೀಪವಿಡುವನೋ ॥ ೧೨ ॥
ಗಂಗೆ ಮಿಂದರೇ ಮಲವು ಹಿಂಗಿತಲ್ಲದೆ
ರಂಗನೊಲಿಯನೋ ಭಕ್ತರ ಸಂಗ ದೊರೆಯದೇ ॥ ೧೩ ॥
ವೇದ ಓದಲೂ ಬರಿದೆ ವಾದ ಮಾಡಲೂ
ಹಾದಿಯಾಗದೋ ಬುಧರ ಪಾದ ನಂಬದೇ ॥ ೧೪ ॥
ಲೆಕ್ಕವಿಲ್ಲದೇ ದೇಶ ತುಕ್ಕಿ ಬಂದರೂ
ದುಃಖವಲ್ಲದೇ ಲೇಶ ಭಕ್ತಿ ದೊರಕದೂ ॥ ೧೫ ॥
ದಾನ ಮಾಡಲೂ ದಿವ್ಯ ಗಾನ ಪಾಡಲೂ
ಜ್ಞಾನ ದೊರೆಯದೋ ಇವರಧೀನನಾಗದೇ ॥ ೧೬ ॥
ನಿಷ್ಠೆ ಯಾತಕೇ ಕಂಡ ಕಷ್ಟವ್ಯಾತಕೇ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೋ ॥ ೧೭ ॥
ಪೂಜೆ ಮಾಡಲೂ ಕಂಡ ಗೋಜು ಬೀಳಲೂ
ಬೀಜಮಾತಿನ ಫಲ ಸಹಜ ದೊರೆಯದೋ ॥ ೧೮ ॥
ಸುರರು ಎಲ್ಲರೂ ಇವರ ಕರವ ಪಿಡಿವರೂ
ತರಳರಂದದೀ ಹಿಂದೆ ತಿರುಗುತಿಪ್ಪರೂ ॥ ೧೯ ॥
ಗ್ರಹಗಳೆಲ್ಲವೂ ಇವರ್ಗೆ ಸಹಾಯಮಾಡುತಾ
ಅಹೋರಾತ್ರಿಲೀ ಸುಖದ ನಿವಹ ಕೊಡುವವೋ ॥ ೨೦ ॥
ವ್ಯಾಧಿಬಾರದೋ ದೇಹಬಾಧೆ ತಟ್ಟದೋ
ಆದಿದೇವನಾ ಸುಪ್ರಸಾದವಾಹುದೋ ॥ ೨೧ ॥
ಪತಿತ ಪಾಮರ ಮಂದಮತಿಯು ನಾ ಬಲೂ
ಸ್ತುತಿಸಲಾಪೆನೇ ಇವರ ಅತಿಶಯಂಗಳಾ ॥ ೨೨ ॥
ಕರುಣದಿಂದಲೀ ಎಮ್ಮ ಪೊರೆವನಲ್ಲದೇ
ದುರಿತಕೋಟಿಯ ಬ್ಯಾಗ ತರಿವ ದಯದಲೀ ॥ ೨೩ ॥
ಮಂದಮತಿಗಳೂ ಇವರ ಛಂದವರಿಯದೇ
ನಿಂದೆಮಾಡಲೂ ಭವದ ಬಂಧ ತಪ್ಪದೋ ॥ ೨೪ ॥
ಇಂದಿರಾಪತಿ ಇವರ ಮುಂದೆ ಕುಣಿವನೋ ।
ಅಂದ ವಚನವಾ ನಿಜಕೆ ತಂದುಕೊಡುವನೋ ॥ ೨೫ ॥
ಉದಯಕಾಲದೀ ಈ ಪದವ ಪಠಿಸಲೂ
ಮದಡನಾದರೂ ಜ್ಞಾನ ಉದಯವಾಹುದೋ ॥ ೨೬ ॥
ಸಟೆ ಇದಲ್ಲವೋ ವ್ಯಾಸವಿಠಲ ಬಲ್ಲನೋ
ಪಠಿಸಬಹುದಿದೂ ಕೇಳಿ ಕುಟಿಲರಹಿತರೂ ॥ ೨೭ ॥
ಪಿಡಿಎಫ್ ಆವೃತ್ತಿ (A4) । (A5) । (phone)
श्री विजयरायर कवच । shri vijayarayara kavacha